ಕೊಂಡ ಹಾಯುವುದು

	ಹರಕೆ ಹೊತ್ತವರು ಗೊತ್ತಾದ ದಿನ ನಿಗಿನಿಗಿ ಉರಿಯುತ್ತಿರುವ ಕೆಂಡದ ಕೊಂಡದಲ್ಲಿ ಬರಿಗಾಲಿನಲ್ಲಿ ನಡೆದು ಹೋಗುವ ಒಂದು ಕಟ್ಟಳೆಗೆ ಈ ಹೆಸರಿದೆ.

	ಜನಪದ ಜೀವನದಲ್ಲಿ ಇಂದಿಗೂ ಕಂಡುಬರುವ ವಿದ್ಯುಕ್ತ ಆಚರಣೆಗಳಲ್ಲಿ ಇದೂ ಒಂದು. ಸಾಮಾನ್ಯವಾಗಿ ಹೆಣ್ಣುದೇವತೆಗಳ ಗುಡಿಗಳ ಎದುರು ಇಂಥ ಕೊಂಡಗಳಿರುತ್ತವೆ. ಅದರಲ್ಲೂ ಸಾತ್ತ್ವಿಕ ದೇವತೆಗಳಿಗಿಂತ ಉಗ್ರ ಅಥವಾ ತಾಮಸ ದೇವತೆಗಳ ಗುಡಿಗಳೆದುರೇ ಇವು ಇರುವುದು ಹೆಚ್ಚು. ಉದಾಹರಣೆಗೆ, ಪಟ್ಟಲದಮ್ಮ, ಕಳಗುಚ್ಚಮ್ಮ, ಮುಳಕಟ್ಟೆಮ್ಮ, ಮದ್ದೂರಮ್ಮ, ಕೊಲ್ಲಾಪುರದಮ್ಮ, ಹಳೆವೂರು ಕಾಳಿಕಾದೇವಿ ಮುಂತಾದ ಗ್ರಾಮದೇವತೆಗಳ ಪರಿಷೆಯ ವೇಳೆಯಲ್ಲಿ ಕೊಂಡ ಹಾಯುವ ಕಾರ್ಯಕ್ರಮ ಇದ್ದೇ ಇರುತ್ತದೆ. ಲಕ್ಷ್ಮೀ ಮುಂತಾದ ಸಾತ್ತ್ವಿಕ ದೇವತೆಗಳ ಗುಡಿಗಳಲ್ಲಾಗಲೀ ಗಂಡು ದೇವತೆಗಳ ಗುಡಿಗಳಲ್ಲಾಗಲೀ ಈ ಕಟ್ಟಳೆ ನಡೆಯುವುದಿಲ್ಲ.

	ಕೊಂಡ ಹಾಯುವುದು ನಮಗೆ ಸೀತೆಯ ಅಗ್ನಿಪ್ರವೇಶ ಪ್ರಸಂಗವನ್ನು ನೆನಪಿಗೆ ತರುತ್ತದೆ. ನಾನೇನು ತಪ್ಪು ಮಾಡಿಲ್ಲ, ಅನ್ಯಾಯ ಮಾಡಿಲ್ಲ, ನಾನು ಪರಿಶುದ್ಧ ಎಂಬುದನ್ನು ದೇವರೆದುರು ಇಂಥ ಅಗ್ನಿದಿವ್ಯದ ಮುಖಾಂತರ ಜನಪದ ಸಾಬೀತು ಪಡಿಸಿಕೊಳ್ಳುವಂತೆ ಕಾಣುತ್ತದೆ. ಸಾಮಾನ್ಯವಾಗಿ ದೇವರಿಗೆ ಅಥವಾ ಜನಗಳಿಗೆ ಎರಡು ಬಗೆದವರು ಕೊಂಡ ಹಾಯುವಾಗ ಮೂರ್ಛೆ ಬೀಳುತ್ತಾರೆ ಎಂಬ ನಂಬಿಕೆಯುಂಟು. ಆದರೆ ಅಂಥವರ ಅಪರಾಧಪ್ರಜ್ಞೆಯೇ ಕೊಂಡ ಹಾಯುವಾಗ ಮೂರ್ಛೆ ಬೀಳುವಂತೆ ಮಾಡಬಹುದು-ಎಂಬುದು ವೈಜ್ಞಾನಿಕ ಸತ್ಯ. ಅದು ಶುದ್ಧ ಮನಶ್ಯಾಸ್ತ್ರಕ್ಕೆ ಸಂಬಂಧಪಟ್ಟದ್ದು; ಆದರೂ ಇಂಥ ಅನೇಕ ನಂಬಿಕೆಗಳು ಜನಗಳಲ್ಲಿ ಉಂಟು.

	ಹಗಲು ಹೊತ್ತು ಕೊಂಡ ಹಾಯುವ ಹಾಗೂ ಇರುಳು ಹೊತ್ತು ಕೊಂಡ ಹಾಯುವ ಪದ್ಧತಿಗಳುಂಟಾಗಿ ಕೊಂಡಗಳನ್ನು ಹಗಲು ಕೊಂಡ ಮತ್ತು ಇರುಳು ಕೊಂಡ ಎಂದು ವಿಂಗಡಿಸುವ ವಾಡಿಕೆ ಉಂಟು.

	ಸಾಮಾನ್ಯವಾಗಿ ಕೊಂಡಗಳು ಒಂದು ಮಾರಗಲ ಇರುತ್ತವೆ. ಆದರೆ ಅವುಗಳ ಉದ್ದದಲ್ಲಿ ವ್ಯತ್ಯಾಸವುಂಟು. ಕೆಲವು ಒಂದೆರಡು ಮಾರುದ್ದದವಾದರೆ ಇನ್ನು ಕೆಲವು ಹತ್ತಾರು ಮಾರುದ್ದದವಾಗಿರುತ್ತವೆ. ಆಯಾ ದೇವತೆಗಳ ಶಕ್ತಿಸಾಮಥ್ರ್ಯಗಳ ಪ್ರತೀಕವಾಗಿ.

	ಜಾತ್ರೆಗಳ ಸಂದರ್ಭದಲ್ಲಿ ಕೊಂಡದ ಸಿದ್ಧತೆಗಾಗಿ ಮರದ ದಿಮ್ಮಿಗಳನ್ನು ಗಾಡಿಗಟ್ಟಲೆ ತಂದು ದೇವಸ್ಥಾನದ ಎದುರಿರುವ ಕೆಂಡದ ಮೇಲೆ ಅಡ್ಡಡ್ಡಲಾಗಿ ಪೇರಿಸುತ್ತಾರೆ. ಯಾವ ಹೊತ್ತಿಗೆ ಕೊಂಡ ಹಾಯಬೇಕೋ ಆ ಹೊತ್ತಿಗೆ ದಿಮ್ಮಿಗಳೆಲ್ಲ ಹತ್ತಿ ಉರಿದು ಕೆಂಡವಾಗುವಂತೆ ಮೊದಲೇ ದೇವರ ಪೂಜಾರಿ, ಊರಿನ ಪಣ-ಮೊದಲೆಯ ನೇತೃತ್ವದಲ್ಲಿ ಪೂಜೆ ಪುನಸ್ಕಾರಗಳೊಂದಿಗೆ ಕಟ್ಟಿಗೆಗೆ ಬೆಂಕಿ ಕೊಟ್ಟಿರುತ್ತಾನೆ. ಜ್ವಾಲೆ ಆಕಾಶ ಮುಟ್ಟುವಂತಿರುತ್ತದೆ. ದಿಮ್ಮಿಗಳೆಲ್ಲ ಉರಿದು ಕೆಂಡವಾದ ಮೇಲೆ ಕಂದಕದ ಉದ್ದಕ್ಕೂ ಕೆಂಡವನ್ನು ಸಮನಾಗಿ ಹರಡುತ್ತಾರೆ. ಸಾಮಾನ್ಯವಾಗಿ ಕೊಂಡದಲ್ಲಿ ತೊಡೆಮಟ್ಟ ಅಥವಾ ಸೊಂಟಮಟ್ಟ ಕೆಂಡವಿರುತ್ತದೆ.

	ಕೊಂಡ ಹಾಯುವ ಮೊದಲು ಜನ ಮಡೆಗಡಿಗೆಯನ್ನು (ಮಡಿಯ ನೀರುಗಡಿಗೆ) ಹೊತ್ತುಕೊಂಡ ಪೂಜಾರಿಯನ್ನು ಅವನ ಮನೆಯಿಂದ ನಡೆಮಡಿಯ ಮೇಲೆ ವಾದ್ಯ ಸಮೇತ ಕರೆತರುತ್ತಾರೆ. ಬಾಯಿಬೀಗ ಚುಚ್ಚಿಸಿಕೊಂಡು ಕೊಂಡ ಹಾಯುತ್ತೇವೆ ಎಂದು ಹರಸಿಕೊಂಡ ಭಕ್ತಾದಿಗಳೂ ನಡೆಮಡಿಯ ಮೇಲೆ ಪೂಜಾರಿಯ ಹಿಂದೆಯೇ ಹೊರಟುಬರುತ್ತಾರೆ. ಅಂದು ಅವರೆಲ್ಲ ಕಟ್ ಉಪವಾಸ ಮಾಡಿರುತ್ತಾರೆ; ಹನಿ ನೀರನ್ನೂ ನಾಲಗೆಗೆ ಸೋಕಿಸಿರುವುದಿಲ್ಲ. ಮೊದಲು ಮಡೆ ಹೊತ್ತ ಪೂಜಾರಿ ಕೊಂಡ ಹಾಯುತ್ತಾನೆ; ಅವನ ಹಿಂದೆ ಬಾಯಿ ಬೀಗದವರು, ಆರತಿಯನ್ನು ಹೊತ್ತ ಹೆಂಗಸರು ಹಾಗೂ ಉಳಿದವರು ನಡೆಯುತ್ತಾರೆ. ಹಾಗೆ ಹಾದುಹೋಗುವಾಗ ಬೆಂಕಿಯಿಂದಾಗಿ ಯಾರ ಕಾಲಲ್ಲೂ ಬೊಬ್ಬೆ ಏಳುವುದಿಲ್ಲ, ಬೆಂಕಿ ಯಾರನ್ನೂ ಸುಡುವುದಿಲ್ಲ. ಕೊಂಡದ ಕೆಂಡ ಅವರ ಪಾಲಿಗೆ ಕೆಂಡಮಲ್ಲಿಗೆ ಹೂವು ಇದ್ದಂತಾಗುತ್ತದೆ. ಈ ಪವಾಡ ಇನ್ನೂ ಬಿಡಿಸಲಾಗದ ಒಗಟಾಗಿಯೇ ಉಳಿದಿದೆ.

	ಇಂಥದೇ ಆಚರಣೆ ದಕ್ಷಿಣ ಕನ್ನಡ, ಕೊಡಗು, ಉತ್ತರ ಕೇರಳ ಪ್ರದೇಶಗಳಲ್ಲಿ ಒತ್ತೆಕೋಲ ಎಂಬ ಹೆಸರಿನಲ್ಲಿ ರೂಢಿಯಲ್ಲಿದೆ ಎಂದು ತಿಳಿದುಬರುತ್ತದೆ. ಒಟ್ಟಿನಲ್ಲಿ ದೇವರ ಸಾಕ್ಷಿಯಲ್ಲಿ ತಾವು ಪರಿಶುದ್ಧರೆಂಬುದನ್ನು, ದೈವದ್ರೋಹ ಅಥವಾ ಜನದ್ರೋಹ ಮಾಡಿಲ್ಲವೆಂಬುದನ್ನು ರುಜುವಾತು ಪಡಿಸಿಕೊಳ್ಳಲು ಜನಪದ ಬೆಳಸಿಕೊಂಡು ಹಾಗೂ ಉಳಿಸಿಕೊಂಡು ಬಂದಿರುವ ಪದ್ಧತಿ ಇದು ಎಂದು ಹೇಳಬಹುದು.
(ಎಸ್.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ